ಸೋಮೇಶ್ವರ (ಹೊಯ್ಸಳ)

	ಹೊಯ್ಸಳ ದೊರೆ (1235-53). ಎರಡನೆಯ ನರಸಿಂಹ ಮತ್ತು ಅವನ ಪಟ್ಟದ ರಾಣಿಯಾದ ಕಾಳಲದೇವಿಯ ಮಗ. ಇವನಿಗೆ ವೀರ ಸೋಮೇಶ್ವರ, ಪ್ರತಾಪ ಸೋವಿದೇವ ಎಂಬ ಹೆಸರುಗಳೂ ಇದ್ದವು. ಇವನ ತಾಯಿ ಬಾಲ್ಯದಲ್ಲೇ ಮರಣ ಹೊಂದಿದ್ದರಿಂದ ಇವನು ನರಸಿಂಹನ ಸಹೋದರಿಯೂ ಮೂರನೆಯ ರಾಜರಾಜ ಚೋಳನ ರಾಣಿಯರಲ್ಲೊಬ್ಬಳೂ ಆದ ಸೋವಲದೇವಿಯ ಪೋಷಣೆಯಲ್ಲಿ ತಮಿಳುನಾಡಿನಲ್ಲಿ ಬೆಳೆದ. ತನ್ನ ತಂದೆಯ ಆಳಿಕೆಯ ಕಾಲದಿಂದಲೂ ಅಂದರೆ, 1228ರಿಂದ, ಈತ ಹೊಯ್ಸಳ ಸಾಮ್ರಾಜ್ಯದ ತಮಿಳು ಪ್ರದೇಶಗಳ ಆಳಿಕೆಯನ್ನು ತನ್ನ ರಾಜಧಾನಿಯಾದ ವಿಕ್ರಮಪುರದಿಂದ ನಿರ್ವಹಿಸುತ್ತಿದ್ದು ತಮಿಳು ನಾಡಿನ ರಾಜಕೀಯದಲ್ಲಿ ಹೆಚ್ಚು ಆಸಕ್ತನಾಗಿದ್ದ. ತಂದೆಯ ಮರಣಾನಂತರ 1235ರಲ್ಲಿ ದೋರಸಮುದ್ರದಲ್ಲಿ ಸೋಮೇಶ್ವರ ಪಟ್ಟಾಭಿಷಿಕ್ತನಾದ. ಇವನ ಆಳಿಕೆಯ ಪ್ರಾರಂಭದಲ್ಲಿ ಸೇವುಣರು ಹೊಯ್ಸಳರ ಮೇಲೆ ಯುದ್ಧ ಹೂಡಿದರು. ಸೇವುಣಕೃಷ್ಣನ ದಂಡನಾಯಕನೊಬ್ಬ ಪ್ರಬಲ ವಿರೋಧಿಗಳಾದ ಹೊಯ್ಸಳರನ್ನು ಸೋಲಿಸಿ ಕಾವೇರೀ ತೀರದವರೆಗೂ ದಂಡೆತ್ತಿ ಹೋಗಿ ವಿಜಯಸ್ಥಂಭವನ್ನು ಸ್ಥಾಪಿಸಿದುದಾಗಿ ಧಾರವಾಡ ಜಿಲ್ಲೆಯಲ್ಲಿ ಸಿಕ್ಕಿರುವ ಶಾಸನವೊಂದರಲ್ಲಿ ಹೇಳಿಕೊಂಡಿದ್ದಾನೆ. ಆದರೆ ಈ ಹೇಳಿಕೆ ಉತ್ಪ್ರೇಕ್ಷೆಯಿಂದ ಕೂಡಿದ್ದು ಸತ್ಯಕ್ಕೆ ದೂರವಾಗಿದೆ. ಹೊಯ್ಸಳ ಸೈನ್ಯ ಸೋಮೇಶ್ವರನ ದಂಡನಾಯಕನಾದ ಕಾಮೇಯ ನಾಯಕನ ನೇತೃತ್ವದಲ್ಲಿ ಸೇವುಣರನ್ನು ತುಂಗಭದ್ರಾತೀರದಲ್ಲಿ ಸೋಲಿಸಿ ಹಿಮ್ಮೆಟ್ಟಿಸಿತು. 1236ರಲ್ಲಿ ಸೋಮೇಶ್ವರ ಸೋಲಾಪುರದ ಬಳಿಯ  ಪಂಡರಾಪುರ ದೇವಾಲಯಕ್ಕೆ ಮಹಾದಾನಗಳನ್ನು ನೀಡಿ ಅಲ್ಲಿ ಒಂದು ಶಾಸನವನ್ನು ಹಾಕಿಸಿದ.

	ಸೋಮೇಶ್ವರ ತಮಿಳುನಾಡಿನಲ್ಲಿ ಚೋಳ, ಪಾಂಡ್ಯರೊಡನೆ ಅನೇಕ ಯುದ್ಧಗಳಲ್ಲಿ ತೊಡಗಬೇಕಾಯಿತು. ಮೂರನೆಯ ರಾಜರಾಜ ಚೋಳನ ಉತ್ತರಾಧಿಕಾರಿಯಾದ ಮೂರನೆಯ ರಾಜೇಂದ್ರ ಹೊಯ್ಸಳರ ಆಶ್ರಯವನ್ನು ತಿರಸ್ಕರಿಸಿ ಸ್ವತಂತ್ರನಾಗಿ ಆಳಲುಪಕ್ರಮಿಸಿದ. ಆದರೆ ಅವನು ಸೋಮೇಶ್ವರನಿಂದ ಪರಾಜಿತನಾಗಿ, ಶರಣಾಗತನಾಗಿ ತನ್ನ ಸಿಂಹಾಸನವನ್ನು ಮರಳಿ ಪಡೆದ. ಆ ವೇಳೆಗೆ ಹೆಚ್ಚುಪ್ರಬಲರಾಗುತ್ತಿದ್ದ ಮಧುರೆಯ ಪಾಂಡ್ಯರು ಹೊಯ್ಸಳ ಸೈನ್ಯವನ್ನು ಸೋಲಿಸಿದರು. ಇದರಿಂದ ಕುಪಿತನಾದ ಸೋಮೇಶ್ವರ ತಾನೇ ಸೈನ್ಯದ ನೇತೃತ್ವವನ್ನು ವಹಿಸಿ ಪಾಂಡ್ಯರಾಜನಾದ ಮಾರವರ್ಮನ್ ಸುಂದರ ಪಾಂಡ್ಯನನ್ನು ಅವನ ಮಿತ್ರನಾದ ಕಾಡವ ಕೋಪೆರುಂಜಿಂಗನನ್ನು ಸೋಲಿಸಿದ. ಅನಂತರ ರಾಮೇಶ್ವರದವರೆಗೂ ದಿಗ್ವಿಜಯ ಮಾಡಿ ಅಲ್ಲಿ ಪ್ರಸಿದ್ಧ ದೇವಾಲಯಕ್ಕೆ ತನ್ನ ಹೆಸರಿನಲ್ಲಿ ಅನೇಕ ದಾನಧರ್ಮಗಳನ್ನು ನೀಡಿದ. ಇಡೀ ತಮಿಳು ನಾಡಿನಲ್ಲಿ ತನ್ನ ಪರಮಾಧಿಕಾರವನ್ನು ಸ್ಥಾಪಿಸಿದ. ಹೊಯ್ಸಳ, ಚೋಳ ಮತ್ತು ಪಾಂಡ್ಯ ರಾಜಮನೆತನಗಳ ಮಧ್ಯೆ ರಕ್ತಸಂಬಂಧವೂ ಏರ್ಪಟ್ಟಿತ್ತು. ಮುಮ್ಮಡಿ ರಾಜೇಂದ್ರಚೋಳ ಮತ್ತು ಇಮ್ಮಡಿ ಮಾರವರ್ಮನ್ ಸುಂದರ ಪಾಂಡ್ಯರು ಸೋಮೇಶ್ವರನನ್ನು ತಮ್ಮ ಶಾಸನಗಳಲ್ಲಿ ಮಾಮಾದಿಗಳ್ ಎಂಬುದಾಗಿ ಸಂಬೋಧಿಸಿ, ಇವನ ಹೆಸರಿನಲ್ಲಿ ಅನೇಕ ದಾನ ಶಾಸನಗಳನ್ನು ನೀಡಿದ್ದಾರೆ. ಕನ್ನಡನಾಡಿನ ಹೆಚ್ಚು ಮಂದಿ ದಂಡ ನಾಯಕರೂ ಅಧಿಕಾರಿಗಳೂ ಇವನ ಕಾಲದಲ್ಲಿ ತಮಿಳು ನಾಡಿನಲ್ಲಿ ನೇಮಕಗೊಂಡು ಕಾರ್ಯನಿರ್ವಹಿಸುತ್ತಿದ್ದರು. ಪುದುಕೋಟೆ ಸಮೀಪದ ತಿರುಮಾಯಮ್ ಬಳಿಯಲ್ಲಿ ದೊರೆತಿರುವ ಸೋಮೇಶ್ವರನ ಶಾಸನದ ಪ್ರಕಾರ ಇವನು ಅಲ್ಲಿ ಶೈವ ಮತ್ತು ವೈಷ್ಣವ ಪಂಥೀಯರ ಮಧ್ಯೆ ತಲೆದೋರಿದ್ದ ವಿವಾದವನ್ನು ಪರಿಹರಿಸಿದ. ಶ್ರೀರಂಗಂ ಬಳಿಯಲ್ಲಿದ್ದ ತನ್ನರಾಜಧಾನಿಯಾದ ವಿಕ್ರಮಪುರದಲ್ಲಿ (ಕಣ್ಣಾನೂರು) ಹೊಯ್ಸಳ ಶೈಲಿಯಲ್ಲಿ ಸುಂದರವಾದ ಹೊಯ್ಸಳೇಶ್ವರ ದೇವಾಲಯವನ್ನು ಕಟ್ಟಿಸಿ ಅಲ್ಲಿ ತನ್ನ ತಂದೆ ಮತ್ತು ತಾತಂದಿರ ಶಿಲಾಪ್ರತಿಮೆಗಳನ್ನು ಸ್ಥಾಪಿಸಿದ. ಹಿರಣ್ಯಗರ್ಭ, ತುಲಾಪುರುಷ ಮೊದಲಾದ ವೇದೋಕ್ತ ಯಜ್ಞಗಳನ್ನು ಆಚರಿಸಿದ. ನುಗ್ಗೇಹಳ್ಳಿಯ ಲಕ್ಷ್ಮೀನರಸಿಂಹ, ಜಾವಗಲ್ಲಿನ ಲಕ್ಷ್ಮೀನಾರಾಯಣ ಮೊದಲಾದ ಸುಂದರ ದೇವಾಲಯಗಳು ಇವನ ಆಳಿಕೆಯಲ್ಲಿ ಕಟ್ಟಲ್ಪಟ್ಟವು. ಇವನ ಆಸ್ಥಾನ ಕವಿಯಾದ ಎರಡನೆಯ ವಿದ್ಯಾಚಕ್ರವರ್ತಿ ಗದ್ಯಕರ್ಣಾಮೃತ ಎಂಬ ಗ್ರಂಥವನ್ನು ರಚಿಸಿದ. ಸೋಮೇಶ್ವರ ಜೈನಧರ್ಮೀಯರಿಗೂ ಪ್ರೋತ್ಸಾಹ ನೀಡಿದ್ದ.

	ಸೋಮೇಶ್ವರನಿಗೆ ಬಿಜ್ಜಳದೇವಿ ಮತ್ತು ದೇವಲದೇವಿ ಎಂಬ ಇಬ್ಬರು ರಾಣಿಯರಿದ್ದರು. ಬಿಜ್ಜಳದೇವಿಗೆ ನರಸಿಂಹ ಎಂಬ ಮಗ, ದೇವಲದೇವಿಗೆ ರಾಮನಾಥ ಎಂಬ ಮಗ ಜನಿಸಿದರು. ಪ್ರಾಪ್ತವಯಸ್ಕರಾದ ಮೇಲೆ ಮಲಸಹೋದರರಲ್ಲಿ ಹೊಂದಾಣಿಕೆಯಿಲ್ಲದಿದ್ದುದರಿಂದಲೂ ಸಾಮ್ರಾಜ್ಯ ಹೆಚ್ಚು ವಿಸ್ತಾರವಾಗಿದ್ದುದರಿಂದಲೂ ಸೋಮೇಶ್ವರ ತನ್ನ ಕೊನೆಗಾಲದಲ್ಲಿ ರಾಜ್ಯವನ್ನು ಎರಡು ಭಾಗವಾಗಿ ಮಾಡಿದ. ದೋರಸಮುದ್ರ ರಾಜಧಾನಿಯಾಗಿದ್ದ ಉತ್ತರದ ಕರ್ನಾಟಕದ ಭಾಗವನ್ನು ಮೂರನೆಯ ನರಸಿಂಹನಿಗೂ ವಿಕ್ರಮಪುರ ರಾಜಧಾನಿಯಾಗಿದ್ದ ತಮಿಳುನಾಡು ಭಾಗಗಳನ್ನು ರಾಮನಾಥನಿಗೂ ಹಂಚಿದ. ಈ ವಿಭಜನೆ 1253ರಲ್ಲಿ ಆಗಿರಬೇಕೆಂಬುದಕ್ಕೆ ಸೂಚನೆಗಳಿವೆ. ಅನಂತರ ಸ್ವಲ್ಪ ಕಾಲದಲ್ಲೇ ಸೋಮೇಶ್ವರ ಮರಣ ಹೊಂದಿದ (ಸು. 1255).	
(ಜಿ.ಆರ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ